ಮುಖಪುಟ /ನಮ್ಮದೇವಾಲಯಗಳು

ಹನುಮಂತನಗರದ ಆನಂದ  ಮಿಲನಾದ್ರಿ

*ಟಿ.ಎಂ.ಸತೀಶ್

Hanumanthanagar anjaneya temple, ananda milanadri, ಹನುಮಂತನಗರ ಆಂಜನೇಯ ದೇವಾಲಯ, ಆನಂದ ಮಿಲನಾದ್ರಿ, ಕನ್ನಡರತ್ನ.ಕಾಂ ಚಿತ್ರ, kannadaratna.comಹನುಮಂತನಗರ ಬೆಂಗಳೂರು ಮಹಾನಗರದ ಹೃದಯಭಾಗದಲ್ಲಿರುವ ಪ್ರದೇಶ. ಗವಿಪುರದ ಭಾಗವಾಗಿದ್ದ ಈ ಭೂಭಾಗ ಒಂದು ಕಾಲದಲ್ಲಿ ಸುಂಕೇನಹಳ್ಳಿ ಎಂದು ಕರೆಸಿಕೊಂಡಿತ್ತು. ಇದು ಹನುಮಂತನಗರವಾಗಲು ಕಾರಣ ಇಲ್ಲಿ ನೆಲೆಸಿರುವ ಕನ್ನಡ ಕುಲ ಪುಂಗವ ಹನುಮಂತ.

ಬಹಳ ಹಿಂದೆ  ಈ ಜಾಗ ಬೆಟ್ಟಗುಡ್ಡಗಳಿಂದ ಕೂಡಿತ್ತು. ಗಿಡ, ಮರಗಳು ಬೆಳೆದ ದಟ್ಟ ಕಾಡಿನಂತಿತ್ತು. ಇಲ್ಲಿ ಋಷಿ ಮುನಿಗಳು ತಪವನ್ನಾಚರಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿ ಗೌತಮ ಮಹರ್ಷಿಗಳು ಶ್ರೀರಾಮಭಕ್ತ ಆಂಜನೇಯನ ಕುರಿತು ತಪವನ್ನಾಚರಿಸಿ, ಪ್ರಾಣದೇವರ ಪ್ರತಿಷ್ಠೆ ಮಾಡಿದರೆಂಬುದು ಪ್ರತೀತಿ.

ನಂತರ ಗವಿಪುರ ಹಾಗೂ ಸುಂಕೇನಹಳ್ಳಿಯ ಜನತೆ ಇಲ್ಲಿ ಪುಟ್ಟದೊಂದು ಮಣ್ಣಿನ ಗುಡಿ ಕಟ್ಟಿ, ಒಂದೂವರೆ ಅಡಿ ಎತ್ತರದ ಹನುಂತನ ವಿಗ್ರಹ ಇಟ್ಟು ಪೂಜಿಸುತ್ತಿದ್ದರು. 20ನೇ ಶತಮಾನದ ಆರಂಭದಿಂದಲೂ ಈ ಬೆಟ್ಟದ ಮೇಲೆ ಗವಿಪುರದ ಜನತೆ ರಾಮೋತ್ಸವ ಆಚರಿಸುತ್ತಿದ್ದರು.

Hanumanthanagar anjaneya temple, ananda milanadri, ಹನುಮಂತನಗರ ಆಂಜನೇಯ ದೇವಾಲಯ, ಆನಂದ ಮಿಲನಾದ್ರಿ, ಕನ್ನಡರತ್ನ.ಕಾಂ ಚಿತ್ರ, kannadaratna.com1956ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಈ ದೇವಾಲಯವನ್ನು ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು. ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ ಕೆಂಗಲ್ ಹನುಮಂತಯ್ಯನವರು ಕೇಂದ್ರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದಾಗ ಮತ್ತೊಮ್ಮೆ ಈ ದೇವಾಲಯಕ್ಕೆ ಬಂದಾಗ, ಬಾಲಕಿಯೊಬ್ಬಳು ರಾಮ ಮತ್ತು ಆಂಜನೇಯರು ತಬ್ಬಿನಿಂತ ಕಸೂತಿ ಇರುವ ಕರವಸ್ತ್ರವನ್ನು ಅವರಿಗೆ ಕಾಣಿಕೆಯಾಗಿ ಕೊಟ್ಟಳು, ಆ ಚಿತ್ರ ನೋಡಿದ ಕೂಡಲೇ ಹನುಮಂತಯ್ಯನವರಲ್ಲಿ ವಿದ್ಯುತ್ ಸಂಚಲನವಾಯ್ತು, ಅದುವೆ ಇಂದಿನ ದೇವಾಲಯ ನಿರ್ಮಾಣಕ್ಕೆ ಪ್ರೇರಣೆಯಾಯ್ತು.

ಹನುಮಂತಯ್ಯನವರು ರಾಮ ಮತ್ತು ಆಂಜನೇಯರು ಆಲಂಗಿಸಿಕೊಂಡಿರುವ ದೇವಾಲಯ ನಿರ್ಮಾಣಕ್ಕೆ ಚಾಲನೆ ನೀಡಿದರು, ಹನುಮಂತ ಇರುವ ಈ ಪ್ರದೇಶಕ್ಕೆ ಹನುಮಂತನಗರ ಎಂದೇ ನಾಮಕರಣ ಮಾಡಿದರು, ರಾಮ ಆಂಜನೇಯರ ಮಿಲನದ ಸಿಮೆಂಟ್ ಪ್ರತಿಮೆಯ ದೇವಾಲಯವಿರುವ ಗುಡ್ಡಕ್ಕೆ ಆನಂದ ಮಿಲನಾದ್ರಿ ಎಂದೂ ಕರೆದರು. ಒಂದೂವರೆ ಅಡಿ ಎತ್ತರದ ಆಂಜನೇಯನಿದ್ದ ಜಾಗದಲ್ಲಿ 18 ಅಡಿ ಎತ್ತರದ ಎದುರು ಮುಖದ ಆಂಜನೇಯನ ಸುಂದರ ಕೃಷ್ಣ ಶಿಲಾ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಬೆಟ್ಟದ ಮೇಲೆ ವಿಶಾಲವಾದ ಭವ್ಯ ದೇವಾಲಯ ನಿರ್ಮಾಣ ಮಾಡಿಸಿದರು. ದೇವಾಲಯಕ್ಕೆ ಶ್ರೀನಗರದಿಂದ ಬರುವ ಮಾರ್ಗದಲ್ಲಿ ಹಾಗೂ ಗವಿಪುರದಿಂದ ನೇರವಾಗಿ  ಹಾಗೂ ಹಿಂಬದಿಯಲ್ಲಿ ಹನುಮಂತನಗರದಿಂದ ಬರಲು ಮೂರು ಕಡೆ ಮೆಟ್ಟಿಲುಗಳಿವೆ.

Hanumanthanagar anjaneya temple, ananda milanadri, ಹನುಮಂತನಗರ ಆಂಜನೇಯ ದೇವಾಲಯ, ಆನಂದ ಮಿಲನಾದ್ರಿ, ಕನ್ನಡರತ್ನ.ಕಾಂ ಚಿತ್ರ, kannadaratna.comಭವ್ಯವಾದ ದೇವಾಲಯದ ಹೊರ ಭಿತ್ತಿಗಳ ಮೇಲೆ ಶ್ರೀಮನ್ನಾರಾಯಣನ ಲೀಲೆಗಳನ್ನು ಸಾರುವ ಹಲವು ಗಾರೆಯ ಪ್ರತಿಮೆಗಳಿವೆ. ದೇವಾಲಯದ ಮೇಲ್ಛಾವಣಿಯ ಮೇಲೆ ಓಂಕಾರ, ಕಮಲದ ಪುಷ್ಪಗಳ ಸುಂದರ ಶಿಲ್ಪಗಳಿವೆ. ದೇವಾಲಯದ ಹೊರಭಾಗದಲ್ಲಿ ಸುಂದರವಾದ ಉದ್ಯಾನವಿದ್ದು, ಬೆಳಗ್ಗೆ ಹಾಗೂ ಸಂಜೆ ಇಲ್ಲಿಗೆ ಜನ ವಾಯು ವಿಹಾರಕ್ಕೂ ಆಗಮಿಸುತ್ತಾರೆ

ದೇವಾಲಯದ  ಗರ್ಭಗುಡಿಯಲ್ಲಿರುವ ಹನುಮಂತನಿಗೆ ನಿತ್ಯವೂ ಪೂಜೆ ನಡೆಯುತ್ತದೆ. ಹಳೆಯ ಒಂದೂವರೆ ಅಡಿ ಪ್ರಾಣದೇವರ ಮೂರ್ತಿಯನ್ನೂ ಅಲ್ಲಿಯೇ ಪ್ರತಿಷ್ಠಾಪಿಸಲಾಗಿದ್ದು, ಅದಕ್ಕೂನಿತ್ಯ ಪೂಜೆ ಸಲ್ಲುತ್ತದೆ. ಶ್ರೀರಾಮನಮಿ, ಹನುಮಜಯಂತಿ ಹಾಗೂ ಶ್ರಾವಣ ಶನಿವಾರಗಳಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಶ್ರೀರಾಮನವಮಿಯ ಮಾರನೆ ದಿನ ಇಲ್ಲಿ ಪಲ್ಲಕ್ಕಿ ಉತ್ಸವ ಜರುಗುತ್ತದೆ. ರಾತ್ರಿಯಿಡೀ ಬಡಾವಣೆಯಲ್ಲಿ ಸಂಚರಿಸುವ ಉತ್ಸವ ಮೂರ್ತಿ ಬೆಳಗ್ಗೆ ದೇವಾಲಯಕ್ಕೆ ವಾಪಸಾಗುತ್ತದೆ.

Hanumanthanagar anjaneya temple, ananda milanadri, ಹನುಮಂತನಗರ ಆಂಜನೇಯ ದೇವಾಲಯ, ಆನಂದ ಮಿಲನಾದ್ರಿ, ಕನ್ನಡರತ್ನ.ಕಾಂ ಚಿತ್ರ, kannadaratna.comಇಲ್ಲಿ ಸೀತಾಲಕ್ಷ್ಮಣ ಸಮೇತನಾದ ಶ್ರೀರಾಮನ ಸುಂದರ ಉತ್ಸವ ಮೂರ್ತಿಯೂ ಇದೆ. ಅಮಾವಾಸ್ಯೆಗಳಂದು ಇಲ್ಲಿ ಪ್ರಾಣದೇವರಿಗೆ ತೈಲಾಭ್ಯಂಜನ ನಡೆಯುತ್ತದೆ. ಹರಕೆ ಹೊತ್ತು ದೇವರಿಗೆ ತೈಲಾಭ್ಯಂಜನ ಮಾಡಿಸಿದರೆ ರೋಗ ರುಜಿನ ಮಾಯವಾಗುತ್ತದೆ ಎಂಬುದು ಭಕ್ತರ ನಂಬಿಕೆ.

ದೇವಾಲಯದ ನಿರ್ವಹಣೆಗೆ ಸೇವಾ ಸಮಿತಿ ಇದ್ದು, ದೇವಾಲಯವನ್ನು ಅಭಿವೃದ್ಧಿ ಪಡಿಸುವಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಇಲ್ಲಿ ಭಜನೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುತ್ತವೆ. ಈ ದೇವಾಲಯದ ಎದುರು ತಿಮ್ಮೇಶ ಪ್ರಭು ಉದ್ಯಾನವನವಿದ್ದು, ಇಲ್ಲಿ ಸಂಗೀತ ಕಾರಂಜಿ ಇದೆ. ಪ್ರತಿ ಭಾನುವಾರ ಸಂಜೆ 7ರಿಂದ 8ರವರೆಗೆ ಇಲ್ಲಿ ನೃತ್ಯ ಕಾರಂಜಿಯ ಲಾಸ್ಯ ನೋಡಬಹುದು. ಪ್ರವೇಶ ಉಚಿತ.

ಮುಖಪುಟ /ನಮ್ಮ ದೇವಾಲಯಗಳು