ಮುಖಪುಟ /ನಮ್ಮ ದೇವಾಲಯಗಳು  

ಮಹಾಲಕ್ಷ್ಮೀ ಲೇಔಟ್ ದೊಡ್ಡ ಆಂಜನೇಯ

Anjaneya Mahalakshmi layout, ಮಹಾಲಕ್ಷ್ಮೀ ಲೇಔಟ್ ಆಂಜನೇಯ*ಟಿ.ಎಂ.ಸತೀಶ್

ಮಹಾಲಕ್ಷ್ಮೀ ಲೇಔಟ್ ಬೆಂಗಳೂರಿನಲ್ಲಿರುವ ಒಂದು ಪ್ರಮುಖ ಪ್ರದೇಶ. ಈ ಬಡಾವಣೆ ಮೊದಲು ಜನಪ್ರಿಯವಾದದ್ದು, 22 ಅಡಿ ಎತ್ತರದ ಬೃಹತ್ ಆಂಜನೇಯನಿಂದ. ಈ ಪ್ರದೇಶದಲ್ಲಿರುವ ಎತ್ತರದ ಗುಡ್ಡದ ಮೇಲೆ 22 ಅಡಿ ಎತ್ತರ ಹಾಗೂ 16 ಅಡಿ ಅಗಲ ಹಾಗೂ 4ಅಡಿ ದಪ್ಪವಿರುವ ಉದ್ಭವ ಶಿಲೆಯ ಮೇಲೆ ಮಾರುತಿಯ ರೂಪುತಳೆದಿದ್ದಾನೆ.

ಈ ದೈವಿಕ ಶಿಲೆಯ ಮೇಲೆ 1973ರಲ್ಲಿ ಸ್ಥಳೀಯರು ಮಾರುತಿಯ ತೈಲವರ್ಣದ ಚಿತ್ರ ಬರೆಸಿ ರಾಮನವಮಿ ಆಚರಿಸಿದ್ದರು. ಈಗ ಇದೇ ಶಿಲೆಯಲ್ಲಿ ಶಾಸ್ತ್ರೋಕ್ತವಾಗಿ ಮುದ್ದಾದ ವೀರಾಂಜನೇಯ ಸ್ವಾಮಿಯ ಮೂರ್ತಿ ಕಡೆಯಲಾಗಿದೆ. ಈ ಶಿಲೆಯನ್ನು ಕಲೆಯಾಗಿ ಮಾರ್ಪಡಿಸಿ ಆಂಜನೇಯನ ಮೂರ್ತಿ ಮಾಡಲು ಸಮಿತಿಯೊಂದೂ ರಚನೆಯಾಯ್ತು. ಷಣ್ಮುಖಾನಂದ ಸ್ಥಪತಿಯ ಕೈಚಳಕದಿಂದ 1976ರ ಹೊತ್ತಿಗೆ ಇಲ್ಲಿ ಈಗಿರುವ ಮೂರ್ತಿಯ ಸಾಕ್ಷಾತ್ಕಾರವಾಯ್ತು. 76ರ ಜೂನ್ 7ರಂದು ಪ್ರಾಣ ಪ್ರತಿಷ್ಠಾಪನೆಯೂ ನೆರವೇರಿತು.

ಅಂದಿನಿಂದ ಆಂಜನೇಯನ ಈ ಬೀಡು ಪ್ರಸಿದ್ಧವಾಯ್ತು.  ನಂತರ ಬೃಹತ್ ದೇವಾಲಯದ ನಿರ್ಮಾಣವಾಯ್ತು. 1985ಲ್ಲಿ ದೇವಾಲಯಕ್ಕೆ ಆರೂವರೆ ಅಡಿ ಎತ್ತರದ ತಾಮ್ರ ಕಲಶವನ್ನು ಸ್ಥಾಪಿಸಲಾಯ್ತು.

Anjaneya Mahalakshmi layout, ಮಹಾಲಕ್ಷ್ಮೀ ಲೇಔಟ್ ಆಂಜನೇಯಚಿನ್ನದ ಗೋಪುರ: ಆದರೆ ಈಗ ಭಕ್ತಾಗಳಿಂದ ಸಂಗ್ರಹಿಸಿದ ಸುವರ್ಣ ಹಾಗೂ ಧನದಿಂದ ಸುವರ್ಣ ಕಲಶವನ್ನೇ ಮಾಡಿಸಲಾಗಿದೆ. ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಚಿನ್ನದ ಬೃಹತ್ ಕಳಶ ಹೊಂದಿರುವ ಆಂಜನೇಯ ದೇವಾಲಯ ಇದಾಗಿದೆ.  ಇಲ್ಲಿ ಹನುಮದ್ ಸಮೇತ ಸೀತಾರಾಮ ಲಕ್ಷ್ಮಣರ ಅಮೃತ ಶಿಲಾ ಮೂರ್ತಿಗಳ ರೂಪದಲ್ಲಿ ನೆಲೆಸಿದ್ದಾರೆ.

ವಿಘ್ನನಿವಾರಕನಾದ ವಿಘ್ನೇಶ್ವರನ ಪೂಜೆ ಇಲ್ಲದೆ ಕಾರ್ಯವೇ ಇಲ್ಲವಲ್ಲ ಹೀಗಾಗಿ ಗಣಪನ ಸುಂದರ ಅಮೃತ ಶಿಲೆಯ ಮೂರ್ತಿಯನ್ನೂ ಇಲ್ಲಿ ಪ್ರತಿಷ್ಠಾಪಿಸಲಾಗಿದೆ.

ಧ್ಯಾನ ಮಂದಿರ: ಈ ಮಧ್ಯೆ ದೇವಾಲಯಕ್ಕೆಬರುವವರಿಗೆ ಮನಸ್ಸು ಸದಾ ಪ್ರಫುಲ್ಲತೆಯಿಂದರಲೆಂದು ಇಲ್ಲಿ 1989ರಲ್ಲಿ ಧ್ಯಾನ ಮಂದಿರವನ್ನು ನಿರ್ಮಿಸಲಾಗಿದೆ. ಈ ಧ್ಯಾನ ಮಂದಿರ ಸ್ಥಾಪನೆಯ ವಿಚಾರದಲ್ಲೂ ಒಂದು ವಿಶೇಷತೆ ಇದೆ.

ಸಹಸ್ರಾರು ಭಕ್ತರಿಂದ 13ಕೋಟಿ ರಾಮನಾಮ ಬರೆಸಿ ಆ ರಾಮಕೋಟಿಗೆ ಸತತ 13 ದಿನಗಳ ಕಾಲ ದಿನಕ್ಕೆ 52 ದಂಪತಿಯಿಂದ ಪೂಜೆ ಮಾಡಿಸಿ ನಂತರ ನಾಲ್ಕು ಆನೆಗಳ ಮೇಲೆ ರಾಮಕೋಟಿಯನ್ನು ಮೆರವಣಿಗೆ ಮಾಡಿ ಧ್ಯಾನ Anjaneya Mahalakshmi layout, ಮಹಾಲಕ್ಷ್ಮೀ ಲೇಔಟ್ ಆಂಜನೇಯಮಂದಿರದಲ್ಲಿ ಸ್ಥಾಪಿಸಿ ಅದರ ಮೇಲೆ ಧ್ಯಾನಾಂಜನೇಯ ಹಾಗೂ ಕೋದಂಡರಾಮರ ವಿಗ್ರಹ ಸ್ಥಾಪನೆ ಮಾಡಲಾಗಿದೆ.

 ಪುಸ್ತಕ ಭಂಡಾರ: ಯಾರಿಗೇ ಅರಿವು ವೃದ್ಧಿಸಬೇಕಾದರೆ, ಅವರ ಜ್ಞಾನ ಭಂಡಾರ ಹೆಚ್ಚಬೇಕಾದರೆ ಅವರು ಪುಸ್ತಕ ಭಂಡಾರಕ್ಕೆ ಶರಣಾಗಬೇಕು. ಅದಕ್ಕೇ ಅಲ್ಲವೇ ಹಿರಿಯರು ಕೋಶ ಓದು ದೇಶ ಸುತ್ತು ಎಂದು ಹೇಳಿದ್ದು, ಇದನ್ನು ಅರಿತ ಟ್ರಸ್ಟ್ ಭಕ್ತಾದಿಗಳಿಗೆ ಸುಂದರ ಹಾಗೂ ಮನಸ್ಸಿಗೆ ಹಿತ ನೀಡುವಂಥ ಆಧ್ಯಾತ್ಮಿಕ ಸಾಹಿತ್ಯವುಳ್ಳ ಹಾಗೂ ಉತ್ತಮ ಕೃತಿಗಳುಳ್ಳ ಪುಸ್ತಕ ಭಂಡಾರವನ್ನು 1994ರಲ್ಲಿ ಸ್ಥಾಪಿಸಿದೆ.

ಈ ಪುಸ್ತಕ ಭಂಡಾರಕ್ಕೆ ಸಾರ್ವಜನಿಕರಿಂದ ಭಕ್ತಾದಿಗಳಿಂದ ಪುಸ್ತಕಗವನ್ನು ದೇಣಿಗೆ ರೂಪದಲ್ಲಿ ಪಡೆದು ಸಂಗ್ರಹಿಸಿಡಲಾಗಿದೆ. ಇದರ ಉದ್ದೇಶ ಉತ್ತಮ ಆಧ್ಯಾತ್ಮಿಕ ಕೃತಿಗಳು ಎಲ್ಲರಿಗೂ ಓದಲು ಸಿಗುವಂತಾಗಬೇಕು. ಅದರಿಂದ ಅವರ ಮನಸ್ಸು ಪರಿವರ್ತನೆಯಾಗಬೇಕು. ಸಮಾಜಕ್ಕೆ ಒಳಿತಾಗಬೇಕು ಎಂಬುದೇ ಆಗಿದೆ.

 ಇದೆಲ್ಲದರ ಜೊತೆಗೆ ಇಲ್ಲಿ  ಉಚಿತ ಆರೋಗ್ಯ ತಪಾಸಣೆ ಮಾಡುವ ಕಾರ್ಯಕ್ರಮವನ್ನೂ ಟ್ರಸ್ಟ್ ಹಾಕಿಕೊಂಡು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. 1996ರಲ್ಲಿ ಇಲ್ಲಿ ಆರಂಭವಾದ ಆರೋಗ್ಯ ತಪಾಸಣಾ ಕೇಂದ್ರ ಈಗ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿದೆ.

 ಇಲ್ಲಿ ಅವಶ್ಯಕತೆ ಇರುವವರಿಗೆ ಕಣ್ಣಿನ ಪೊರೆ ತೆಗೆಯುವ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗುತ್ತಿದೆ. ಇದಕ್ಕೆ ನಾರಾಯಣ ನೇತ್ರಾಲಯದ ತಜ್ಞ ವೈದ್ಯರ ಸಹಕಾರವೂ ಇದೆ. ರೋಗಿಗಳಿಗೆ ಉಚಿತ ಊಟ, ವಸತಿಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

Anjaneya Mahalakshmi layout, ಮಹಾಲಕ್ಷ್ಮೀ ಲೇಔಟ್ ಆಂಜನೇಯ1999ರಲ್ಲಿ ಇಲ್ಲಿ ದಂತವೈದ್ಯಕೀಯ ಸೌಲಭ್ಯವನ್ನು ಸಹ ಟ್ರಸ್ಟ್ ಭಕ್ತಾದಿಗಳಿಗೆ ಒದಗಿಸಿದೆ. ಪ್ರತಿ ಭಾನುವಾರ ಪರಿಣತ ವೈದ್ಯರು ಇಲ್ಲಿಗೆ ಆಗಮಿಸಿ ಉಚಿತವಾಗಿ ದಂತ ತಪಾಸಣೆ ಮಾಡುತ್ತಾರೆ.

ಸಾಂಸ್ಕೃತಿಕ ಕಾರ್ಯಕ್ರಮ :ಶ್ರೀರಾಮ ಹಾಗೂ ಆಂಜನೇಯ ಇಬ್ಬರೂ ಸಂಗೀತ ಪ್ರಿಯರೆ, ಹೀಗಾಗಿ ಇಲ್ಲಿ ಪ್ರತಿ ಶನಿವಾರ ಸ್ವಾಮಿಯ ಎದುರು ಸಂಗೀತಾರಾಧನೆ ನಡೆಯುತ್ತದೆ.

 ಸ್ಥಳೀಯ ಕಲಾವಿದರು ಮತ್ತು ವಿದ್ವಾಂಸರುಗಳನ್ನು ಕರೆಸಿ ಸ್ವಾಮಿಯ ಎದುರು ಹಾಡಿಸುವ ಪರಿಪಾಠವನ್ನು ಟ್ರಸ್ಟ್ ಬೆಳೆಸಿಕೊಂಡು ಬಂದಿದೆ. ಕಲಾವಿದರಿಗೆ ಪ್ರೋತ್ಸಾಹಿಸಲು ಅವರಿಗೆ ಸೂಕ್ತ ಸಂಭಾವನೆಯನ್ನೂ ಟ್ರಸ್ಟ್ ನೀಡುತ್ತದೆ.

  ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಕೂಡ ಈಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾನುವಾರಗಳಂತೂ ಇಲ್ಲಿ ಜಾತ್ರೆ ನಡೆಯುತ್ತಿರುವಂತೆ ಭಾಸವಾಗುತ್ತದೆ. ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇವಾಲಯದ ಪರಿಸರವನು ಸ್ವಚ್ಛವಾಗಿಡಲು ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

 ಹನುಮ ಜಯಂತಿ: ಇಲ್ಲಿ ಪ್ರತಿ ವರ್ಷ ಮಾರ್ಗಶಿರ ಶುಕ್ಲ ತ್ರಯೋದಶಿಯಂದು ಹನುಮ ಜಯಂತಿ ಅತ್ಯಂತ ವಿಜೃಂಭಣೆಯಿಂದ ಜರುಗುತ್ತದೆ.  ಹನುಮ ಜಯಂತಿಯಕಾಲದಲ್ಲಿ ಒಂದು ವಾರಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ.

 ಹನುಮ ವಾನರ ಸ್ವರೂಪಿ, ವಾನರ ಯೋಧರ ಮುಖ್ಯಸ್ಥ. ಹೀಗಾಗಿ ಹನುಮ ಜಯಂತಿಯ ಕಾಲದಲ್ಲಿ  ಭಕ್ತಾದಿಗಳ ನೆರವಿನಿಂದ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕರ್ತರು ವಾಹನಗಳಲ್ಲಿ ತೆರಳಿ ರಾಜ್ಯದ ವಿವಿಧೆಡೆ ಇರುವ ಸಹಸ್ರಾರು ವಾನರಗಳಿಗೆ ಬಾಳೆಹಣ್ಣು ಹಂಚುವ ಸಂಪ್ರದಾಯ ಇಲ್ಲಿ ಕಳೆದ 2೦ ವರ್ಷಗಳಿಂದಲೂ ಇದೆ. ಇಂದಿಗೂ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ.

ವಾರ್ಷಿಕೋತ್ಸವ: ಪ್ರತಿ ವರ್ಷ ಜ್ಯೇಷ್ಠ ಶುದ್ಧ ದಶಮಿಯಂದು ಶ್ರೀ ಪ್ರಸನ್ನ ವೀರಾಂಜನೇಯಸ್ವಾಮಿಯ ಪ್ರಾಣಪ್ರತಿಷ್ಠೆಯ ವಾರ್ಷಿಕೋತ್ಸವವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿಶೇಷವಾಗಿ ಲೋಕಕಲ್ಯಾಣಾರ್ಥ ಹೋಮ, ಹವನಗಳು ಇಲ್ಲಿ ನಡೆಯುತ್ತವೆ.

Anjaneya Mahalakshmi layout, ಮಹಾಲಕ್ಷ್ಮೀ ಲೇಔಟ್ ಆಂಜನೇಯಸಾಮೂಹಿಕ ಸತ್ಯನಾರಾಯಣ ಪೂಜೆ, ಶ್ರೀಸೀತಾರಾಮ ಕಲ್ಯಾಣೋತ್ಸವ, ಶ್ರೀರಾಮ ಪಟ್ಟಾಭಿಷೇಕ, ಸಾಮೂಹಿಕ ಲಕ್ಷ್ಮೀ ಪೂಜೆಯೇ  ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. ಯಾವುದೇ ಜಾತಿಯ ತಾರತಮ್ಯವಿಲ್ಲದೆ ಇಲ್ಲಿ ಭಕ್ತರು ಪಾಲ್ಗೊಂಡು ಸಾಮೂಹಿಕವಾಗಿ ದೇವರ ಪೂಜೆ ಮಾಡುತ್ತಾರೆ.

ಬೆಣ್ಣೆ ಅಲಂಕಾರ: ಬುಲ್‌ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣಪನಿಗೆ ಬೆಣ್ಣೆ ಅಲಂಕಾರ ಮಾಡಿದಾಗ ನೋಡುವುದೇ ಒಂದು ಸೊಗಸು. ಅಂತೆಯೇ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಬೃಹತ್ ಆಂಜನೇಯ ಮೂರ್ತಿಯೂ ನವನೀತ ಅಲಂಕಾರದಲ್ಲಿ  ವಿಶೇಷ ಮೆರಗು ಪಡೆಯುತ್ತಾನೆ.

 ಸ್ವಾಮಿಯನ್ನು ಆ ಶ್ವೇತ ವರ್ಣದಲ್ಲಿ ನೋಡಲು ನೂರು ಕಣ್ಣೂ ಸಾಲದು ಎಂಬುದು ಅತಿಶಯೋಕ್ತಿಯ ಮಾತಲ್ಲ. ಅಂದ ಹಾಗೆ ಈ ಆಂಜನೇಯ ಮೂರ್ತಿಗೆ ನವನೀತ ಅಲಂಕಾರ ಮಾಡಲು ಕನಿಷ್ಠ ಪಕ್ಷ 450ಕೆ.ಜಿ. ಬೆಣ್ಣೆ ಬೇಕು.

 ಸಾಮಾನ್ಯವಾಗಿ ಇಲ್ಲಿ ಕೊನೆಯ ಶ್ರಾವಣ ಶನಿವಾರ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡುವುದು ವಾಡಿಕೆ. ಈ ಬೆಣ್ಣೆ ಅಲಂಕಾರಕ್ಕಾಗಿ ಭಕ್ತಾದಿಗಳಿಂದ ಬೆಣ್ಣೆಯನ್ನು ಸ್ವೀಕರಿಸಲಾಗುತ್ತದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು