ಮುಖಪುಟ /ನಮ್ಮದೇವಾಲಯಗಳು 

ಗುಬ್ಬಿ ಶ್ರೀ ಚನ್ನಬಸವೇಶ್ವರಸ್ವಾಮಿ ಸನ್ನಿಧಿ

*ಟಿ.ಎಂ.ಸತೀಶ್

Gubbi Channabasaveswara temple,ತುಮಕೂರು ಜಿಲ್ಲೆಯ ತಾಲೂಕು ಕೇಂದ್ರ ಗುಬ್ಬಿ. ರಂಗಭೂಮಿಯ ಭೀಷ್ಮ ವೀರಣ್ಣನವರಿಂದ ಖ್ಯಾತಿಪಡೆದ ಈ ಊರಿನಲ್ಲಿ ಪುರಾತನವಾದ ಚನ್ನಕೇಶವಸ್ವಾಮಿ ದೇವಾಲಯವಿದೆ.

ಗುಬ್ಬಿಗೆ ಹಿಂದೆ ಅಮರಗೊಂಡ, ಶಕಟಪುರ ಎಂಬ ಹೆಸರಿತ್ತು. ಈ ಊರಿಗೆ ಗುಬ್ಬಿ ಎಂಬ ಹೆಸರು ಬರಲು ಕಾರಣ ಎರಡು ಗುಬ್ಬಚ್ಚಿಗಳು. ಹಿಂದೆ ಪವಿತ್ರ ಕ್ಷೇತ್ರವಾಗಿದ್ದ ಇಲ್ಲಿ ಗೋಸಲ ಚನ್ನಬಸವೇಶ್ವರರು, ಅಮರಗೊಂಡ ಮಲ್ಲಿಕಾರ್ಜುನರು, ಮಲ್ಲಣಾರ್ಯ ಮುಂತಾದ ವೀರಶೈವಾಚಾರ್ಯರು ನೆಲೆಸಿದ್ದರು. ಇಲ್ಲಿಯ ಮಲ್ಲಿಕಾರ್ಜುನ ದೇವಾಲಯದಲ್ಲಿ ಮಲ್ಲಣಾರ್ಯನ ನಿತ್ಯ ಪ್ರವಚನ ನೀಡುತ್ತಿದ್ದರಂತೆ. ಪ್ರತಿದಿನ ಮಲ್ಲಣಾರ್ಯರ ಪ್ರವಚನವನ್ನು ಎರಡು ಗುಬ್ಬಚ್ಚಿಗಳು ಕೇಳುತ್ತಿದ್ದವಂತೆ. ಆ ಪ್ರವಚನ ಪರಿಸಮಾಪ್ತಿಗೊಂಡಾಗ ಆ ಎರಡೂ ಗುಬ್ಬಿಗಳು ದೇಹತ್ಯಾಗ ಮಾಡಿ ಸದ್ಗತಿ ಪಡೆದವಂತೆ. ಹೀಗಾಗಿ ಈ ಊರಿಗೆ ಗುಬ್ಬಿ ಎಂಬ ಹೆಸರು ಬಂತು. ಇಲ್ಲಿನ ಮಲ್ಲಿಕಾರ್ಜುನ ದೇವಾಲಯದಲ್ಲಿ ಆ ಎರಡು ಗುಬ್ಬಚ್ಚಿಗಳದೆನ್ನಲಾದ ಸಮಾಧಿಯೂ ಇದೆ.

Gubbi Channabasaveswara temple400 ವರ್ಷಗಳ ಹಿಂದೆ ಅಂದಿನ ಮೈಸೂರು ಅರಸರ ಸಾಮಂತನಾಗಿದ್ದ ಹೊಸಹಳ್ಳಿಗೌಡ ಈ ಊರು ಸ್ಥಾಪಿಸಿದನೆಂದು ತಿಳಿದುಬರುತ್ತದೆ. ಇಲ್ಲಿರುವ ದೇವಾಲಯಗಳ ಪೈಕಿ ಶ್ರೀ ಚನ್ನ ಬಸವೇಶ್ವರ ದೇವಾಲಯ ಪ್ರಮುಖವಾದ್ದು.  ಸುಂದರವಾದ ರಾಜಗೋಪುರ, ಪ್ರವೇಶದ್ವಾರವಿರುವ ಈ ದೇವಾಲಯ ಮೋಹಕವಾಗಿದೆ. ಗೋಪುರದಲ್ಲಿ  ಗಣಪತಿ, ಶಿವಪಾರ್ವತಿ, ಎಡೆಯೂರು ಸಿದ್ದಲಿಂಗೇಶ್ವರರು, ಶಿವಗಣಗಳು, ಷಣ್ಮುಖ, ತಾರಕ ಸಂಹಾರ, ಗಿರಿಜಾ ಕಲ್ಯಾಣ ಮೊದಲಾದ ಪ್ರಸಂಗಗಳ ಶಿಲ್ಪಗಳಿವೆ.

ಪ್ರವೇಶದ್ವಾರದ ಎಡ ಬಲಗಳಲ್ಲಿ ಇರುವ ಗೂಡುಗಳಲ್ಲಿ ಗಣಪತಿ ಹಾಗೂ ಸುಬ್ರಹ್ಮಣ್ಯನ ಮೂರ್ತಿಗಳಿವೆ. ದೇವಾಲಯದ ಒಳ ಪ್ರಾಕಾರದಲ್ಲಿರುವ ಗೋಪುರದ ಮೇಲಿನ ಗೂಡುಗಳಲ್ಲಿ ಗಣಪತಿ, ಸುಬ್ರಹ್ಮಣ್ಯ, ಶಿವಪಾರ್ವತಿ, ನಂದಿಯ ಗಾರೆಯ ಶಿಲ್ಪಗಳಿವೆ. 

Gubbi Channabasaveswaraಇಲ್ಲಿ ಶ್ರೀಶೈಲ ಮಲ್ಲಿಕಾರ್ಜುನನೇ ನೆಲೆಸಿದ್ದಾನೆ ಎಂಬುದು ಪುರಜನರ ನಂಬಿಕೆ. ಪ್ರಧಾನಗರ್ಭಗೃಹದಲ್ಲಿ ಗೋಸಲ ಶ್ರೀ ಚನ್ನಬಸವೇಶ್ವರ ಲಿಂಗವಿದೆ. ಗರ್ಭಗೃಹದ ಬಾಗಿಲವಾಡಗಳಿಗೆ ಹಾಗೂ ಮುಂದಿರುವ ನಂದಿಗೆ ಬೆಳ್ಳಿಯ ಕವಚಗಳನ್ನು ಮಾಡಿಸಲಾಗಿದೆ. ಸುವರ್ಣ ಮುಖವಾಡದಲ್ಲಿ ಶಿವಲಿಂಗದ ಸೌಂದರ್ಯ ನೂರ್ಮಡಿಗೊಳ್ಳುತ್ತದೆ.

ದೇವಾಲಯದ ಮೇಲಿನ ಗೋಪುರಗಳಲ್ಲಿ ಶಿವಪುರಾಣದ ಹಲವು ಶಿಲ್ಪಗಳಿವೆ. ಪಕ್ಕದಲ್ಲಿಯೇ ಇರುವ ಮತ್ತೊಂದು ಗುಡಿಯಲ್ಲಿ ಗೋಸಲ ಪರಂಪರೆಯ ಶೂನ್ಯಸಿಂಹಾಸನಾಧೀಶ್ವರರು ಇಲ್ಲಿದ್ದರೆಂದು ಪ್ರತೀತಿ. ಮುಕ್ಕಣ್ಣನ ಗುಡಿಯಲ್ಲಿ ತ್ರಿವಳಿ ತೆಂಗಿನಮರ ಇರುವುದು ವಿಶೇಷ.

ಗುಬ್ಬಿಯಲ್ಲಿ ಹಲವು ದೇಗುಲಗಳಿದ್ದು, ಇವುಗಳ ಪೈಕಿ  ಗದ್ದೆ ಮಲ್ಲೇಶ್ವರನ ದೇವಸ್ಥಾನ ಅತ್ಯಂತ ಪ್ರಾಚೀನವಾದ್ದು. ಇದು ಮೊದಲು ಊರ ಹೊರಗಿನ ಗದ್ದೆಯಲ್ಲಿದ್ದ ಕಾರಣ ಇದಕ್ಕೆ ಗದ್ದೆ ಮಲ್ಲೇಶ್ವರ ಎಂದೇ ಹೆಸರು ಬಂದಿದೆ. ದೇವಾಲಯದ Gubbiನವರಂಗದಲ್ಲಿ ದಕ್ಷಿಣಾಮೂರ್ತಿ, ಪಾರ್ವತಿ ಮತ್ತು ವೀರಭದ್ರ ಮೂರ್ತಿಗಳಿವೆ. ಊರಿನಲ್ಲಿ ಜನಾರ್ದನ ಮತ್ತು ಬ್ಯಾಟರಾಯಸ್ವಾಮಿ ದೇವಾಲಯಗಳೂ ಇವೆ. ಸನಿಹದಲ್ಲೇ ಶ್ರೀ ಚಂದ್ರಶೇಖರ ಪುರದ ಚಿದಂಬರಾಶ್ರಮದಲ್ಲಿ ದತ್ತಾತ್ರೇಯ ಮಂದಿರವೂ ಗುರುಕುಲವೂ ಇವೆ

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.innin

ಮುಖಪುಟ /ನಮ್ಮದೇವಾಲಯಗಳು