CONNECT WITH US  

ಮಡಿಕೇರಿಯ ಮಳೆ ಮತ್ತು ಚಹಾ

ಕರ್ನಾಟಕದ ಕಾಶ್ಮೀರ ಎಂದೇ ಕರೆಯುವ ಮಡಿಕೇರಿಯನ್ನು ಸುಮಾರು 330 ವರ್ಷಗಳ ಹಿಂದೆ ಬೆಟ್ಟವೊಂದನ್ನು ಸಮತಟ್ಟು ಮಾಡಿ ಕೋಟೆ  ಹಾಗೂ ಅರಮನೆಯನ್ನು ರಾಜ ಮುದ್ದುರಾಜನು ನಿರ್ಮಿಸಿದನು. ಆಗ ಮುದ್ದುರಾಜನ ಕೇರಿ ಎಂದು ಕರೆಯಲ್ಪಡುತ್ತಿದ್ದ ಈ ಸ್ಥಳವು ಕಾಲಾಂತರದಲ್ಲಿ ಮಡಿಕೇರಿ ಎಂದು ಹೆಸರು ಪಡೆದುಕೊಂಡಿತು. ಈ ಮುದ್ದುರಾಜನ ಕೇರಿಯನ್ನು ಕಣ್ತುಂಬಿಕೊಳ್ಳಲು ಮಂಗಳೂರಿನಿಂದ ಸೋದರ ಸಂಬಂಧಿಗಳಾದ ನಾವು ನಮ್ಮ ಅಜ್ಜಿಮನೆಯಲ್ಲಿ ಸೇರಿ ಬೆಳಗಿನ ಜಾವ ಹೊರಡುವುದೆಂದು ತೀರ್ಮಾನಿಸಿದೆವು. ಅದರ ಪ್ರಕಾರ ಏಳು ಜನರ ನಮ್ಮ ತಂಡ ಮಾರನೆಯ ದಿನ ಅಂದರೆ ಮೇ 5ರ ಮುಂಜಾನೆ 4.30ಕ್ಕೆ ಪ್ರಯಾಣವನ್ನು ಬಿ.ಸಿ. ರೋಡ್‌ ಬಳಿಯ ಮೆಲ್ಕಾರ್‌ನಿಂದ ಪ್ರಾರಂಭಗೊಳಿಸಿದೆವು.

ಸುಳ್ಯ ದಾಟಿದ ನಾವು ಅಲ್ಲಿಯೇ ಇದ್ದ ಒಂದು ಸಣ್ಣ ಜಲಪಾತದಲ್ಲಿ ಫೋಟೋ ತೆಗೆದುಕೊಂಡು ಮುಂದೆ ಸಾಗಿದೆವು. ನಮ್ಮ ಕಾರು ದಟ್ಟ ಕಾಡನ್ನು ಸೀಳಿಕೊಂಡು ಮಡಿಕೇರಿಯತ್ತ ತನ್ನ ಪ್ರಯಾಣ ಮುಂದುವರಿಸುತ್ತಿರುವಾಗ ರಸ್ತೆಯ ಇಕ್ಕೆಲಗಳಲ್ಲೂ ಮುಗಿಲೆತ್ತರಕ್ಕೆ ಬೆಳೆದು ನಿಂತ ಮರಗಳು, ಕಾಫಿ ತೋಟಗಳು ನಮ್ಮನ್ನು ಮಡಿಕೇರಿಯ ಪ್ರಕೃತಿ ಸೌಂದರ್ಯದ ಮಡಿಲಿಗೆ ಬರಮಾಡಿಕೊಳ್ಳುತ್ತಿದೆಯೇನೋ ಎಂಬ ಭಾವನೆ ಮೂಡಿಸಿದ್ದಂತೂ ನಿಜ. ಮಂಗಳೂರಿನಲ್ಲಿ ಹೇಗೆ ಮುಗಿಲನ್ನು ಚುಂಬಿಸುವಂಥ ಕಟ್ಟಡಗಳು ತುಂಬಿ ಮುಗಿಲೆತ್ತರದ ಮರಗಿಡಗಳು ಅಪರೂಪಕ್ಕೆಂಬಂತೆ ಕಾಣ ಸಿಗುತ್ತವೆಯೋ, ಅದಕ್ಕೆ ತದ್ವಿರುದ್ಧವಾಗಿ ಮಡಿಕೇರಿಯಲ್ಲಿ ಬಾನೆತ್ತರದ ಮರಗಳ ನಡುವೆ ಅಲ್ಲಲ್ಲಿ ಕಟ್ಟಡಗಳು ಕಾಣಸಿಗು ತ್ತವೆ. ಮಡಿಕೇರಿಯ ನಗರ ವ್ಯಾಪ್ತಿಯು ಒಂದರಿಂದ ಎರಡು ಕಿ.ಮೀ.ಗಳಿಗಷ್ಟೆ ಸೀಮಿತಗೊಂಡಿರುವುದರಿಂದ ಕಾಂಕ್ರೀಟ್‌ ರಸ್ತೆಗಳಾಗಲಿ, ಮೂಲಭೂತ ಸೌಕರ್ಯಗಳಾಗಲಿ, ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾಣಸಿಗುವುದಿಲ್ಲ. ಪ್ರಕೃತಿಯ ಸೌಂದರ್ಯವನ್ನು ಸವಿಯಲು ಹೋದ ನಮಗೆ ಇದೊಂದು ದೊಡ್ಡ ವಿಷಯವಾಗಿರಲಿಲ್ಲ.

 ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ಮಡಿಕೇರಿ ತಲುಪಿದ ನಾವು ಅಲ್ಲಿಯೇ ಇದ್ದ ಹೊಟೇಲ್‌ ಒಂದರಲ್ಲಿ ಬೆಳಗ್ಗಿನ ಉಪಹಾರ ಸೇವಿಸಿದೆವು. ಅಲ್ಲಿನ ತಿಂಡಿಯ ರುಚಿಯೊಂದಿಗೆ ಹೊಟೇಲಿನ ಮಾಲಿಕನಿಗೆ ತುಳು ಬರುತ್ತಿತ್ತು ಎನ್ನುವುದು ಮತ್ತಷ್ಟು ಖುಷಿ ಕೊಟ್ಟಿತ್ತು. ಬಳಿಕ ಎರಡನೆಯ ಲಿಂಗರಾಜನು ಕಟ್ಟಿಸಿದ ಓಂಕಾರೇಶ್ವರ ದೇವಸ್ಥಾನಕ್ಕೆ ಹೋಗಿ ದೇವರ ಆಶೀರ್ವಾದ ಪಡೆದುಕೊಂಡೆವು. ಆಗಷ್ಟೇ ಶುರುವಾದ ಮಳೆಯಲ್ಲಿ ಮಡಿಕೇರಿಯ ಪ್ರಸಿದ್ಧವಾದ ಅಬ್ಬಿ ಜಲಪಾತದೆಡೆಗೆ ಪ್ರಯಾಣ ಬೆಳೆಸಿದೆವು. ಅಬ್ಬಿ ಜಲಪಾತದಲ್ಲಿ ನಮಗೆ ಗೊತ್ತಾದ ಸಂಗತಿ ಎಂದರೆ, ಕೊಡೆಗಳನ್ನು ಬಳಸಿಕೊಂಡು ಕೂಡ ವ್ಯಾಪಾರ ಮಾಡಬಹುದೆಂದು! ಅಬ್ಬಿಯ ಸೌಂದರ್ಯ ಸವಿಯಲು ಕೊಡೆ ಮರೆತು ಬಂದವರಿಗೆ 200 ರೂಪಾಯಿ ಮುಂಗಡ ಬಾಡಿಗೆ ಪಡೆದು ಕೊಡೆಗಳನ್ನು ಅಲ್ಲಿ ಬಾಡಿಗೆಗೆ ನೀಡುತ್ತಾರೆ. ನಾವುಗಳು ಕೂಡ ಜಲಪಾತದ ಸೌಂದರ್ಯ ಸವಿಯಲು ಬರುವ ಅವಸರದಲ್ಲಿ  ಕೊಡೆ ತರಲು ಮರೆತೇ ಹೋಗಿತ್ತು. ಕೊನೆಗೆ ಅನಿವಾರ್ಯವೆಂಬಂತೆ ನಾವು ಕೂಡ 200 ರೂಪಾಯಿ ಕೊಟ್ಟು ಕೊಡೆೆಗಳನ್ನು ಬಾಡಿಗೆಗೆ ಪಡೆದುಕೊಂಡೆವು. ಹಾಗೇ ಕಾಫಿ ತೋಟದಲ್ಲಿ ಮಳೆಯಲ್ಲಿ ಹೆಜ್ಜೆ ಹಾಕುತ್ತ ಸುಮಾರು 500 ಮೀ. ಹೋದಾಗ ಆ ಹಚ್ಚ ಹಸುರಿನ ನಡುವೆ ಸುಮಾರು 50 ಮೀಟರ್‌ ಎತ್ತರದಿಂದ ಮೈದುಂಬಿ ಧುಮ್ಮಿಕ್ಕುವ ಅಬ್ಬಿ ಜಲಧಾರೆಯನ್ನು ನೋಡಿ ನಮ್ಮ ಮನಸ್ಸು ರೋಮಾಂಚನಗೊಂಡಿತು. ಇಷ್ಟೊಂದು ರಮಣೀಯವಾದ ಜಲಪಾತವು ನೆರವಂಡ ಇಂದಿರಾ ಎಂಬುವವರಿಗೆ ಸೇರಿದ ಖಾಸಗಿ ಜಾಗದಲ್ಲಿದೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

ಮಡಿಕೇರಿ ಕೋಟೆ
    ಅಬ್ಬಿಯಿಂದ ನಮ್ಮ ಪಯಣ 17ನೆಯ ಶತಮಾನದಲ್ಲಿ ನಿರ್ಮಾಣಗೊಂಡ ಮಡಿಕೇರಿಯ ಕೋಟೆಯತ್ತ ಸಾಗಿತು. ಮೂರು ಶತಮಾನಗಳು ಕಳೆದರೂ ಇಂದಿಗೂ ಗಟ್ಟಿಮುಟ್ಟಾದ ಆ ಕೋಟೆ ಮತ್ತು ಅದರೊಳಗಿರುವ ಅರಮನೆಯು ಹಿಂದಿನ ಕಾಲದ ರಾಜರುಗಳಿಗೆ ತಮ್ಮ ಅರಮನೆಯನ್ನು ಉಳಿಸಲು ಅವರಿಗಿದ್ದ ಬದ್ಧತೆಯನ್ನು  ಹಾಗೂ ಅಂದಿನವರ ಕಟ್ಟಡ ನಿರ್ಮಾಣ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆೆ. ಕೋಟೆಯ ಮೇಲಿನಿಂದ ಮಡಿಕೇರಿಯ ಅದ್ಬುತ ಸೌಂದರ್ಯವನ್ನು ಕಣ್ತುಂಬಿಕೊಂಡೆವು. ಈ ರೀತಿ ಸೌಂದರ್ಯ ಸವಿಯುತ್ತಿರುವಾಗ ನಮಗೆ ಸಮಯ ಕಳೆದು ಮಧ್ಯಾಹ್ನವಾಗಿದ್ದು ತಿಳಿಯಲೇ ಇಲ್ಲ. ಹೊಟ್ಟೆ ಹಸಿಯುತ್ತಿತ್ತು. ನಾವು ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಚಹಾ ಕುಡಿದು ಮುಂದುವರಿದ ನಮಗೆ ಅಂತೂ ಇಂತೂ ಒಂದು ಹೋಮ್‌ಸ್ಟೇ ಸಿಕ್ಕಿತು. 

ಬೆಳಗ್ಗೆ ಚಳಿಗೆ ಎರಡೆರಡು ಬಾರಿ ಚಹಾ ಹೀರಿ ಅದರ ಜೊತೆಗೆ ಪರೋಟ ತಿಂದು ಕುಶಾಲನಗರದಲ್ಲಿರುವ ಕಾವೇರಿ ನಿಸರ್ಗಧಾಮದ ಕಡೆಗೆ ತೆರಳಿದೆವು. ಸುಮಾರು 64 ಎಕರೆಗಳಷ್ಟು ವಿಸ್ತಾರವಾಗಿ ಹರಡಿದ ಈ ನಿಸರ್ಗಧಾಮದ ಒಂದು ಬದಿಯಲ್ಲಿ ಕಾವೇರಿ ನದಿ ಹರಿಯುತ್ತಿದ್ದರೆ ಇನ್ನೊಂದು ಕಡೆ ಆಳೆತ್ತರಕ್ಕೆ ಬೆಳೆದ ಬಿದಿರಿನ ತೋಪುಗಳು, ಶ್ರೀಗಂಧ, ತೇಗದ ಮರಗಳು ಹಾಗೂ ಅಲ್ಲಲ್ಲಿ ನಿರ್ಮಿಸಿದ ತೂಗುಸೇತುವೆಗಳು, ಜಿಂಕೆ ಮೊಲ ಮುಂತಾದ ವನ್ಯಜೀವಿಗಳು, ಹಸಿರು ತುಂಬಿದ ವಾತಾವರಣ ನಮ್ಮ ಮನಸ್ಸಿಗೆ ಮುದ ನೀಡಿತು, ಅಲ್ಲಿ ಸ್ವಲ್ಪ ಸಮಯ ವಿರಮಿಸಿದ ನಂತರ ನಮ್ಮ ಪಯಣ ಧರ್ಮಶಾಲದ ನಂತರ ಅತಿ ಹೆಚ್ಚು  ಟಿಬೆಟಿಯನ್ನರು ವಾಸವಾಗಿರುವಂತಹ ಬೈಲುಕುಪ್ಪೆಯ ಕಡೆಗೆ ತಿರುಗಿತು. ಬೈಲುಕುಪ್ಪೆಯಲ್ಲಿ ನೋಡಲೇಬೇಕಾದಂತಹ ಸ್ಥಳವೆಂದರೆ ಟಿಬೆಟಿಯನ್‌ ವಾಸ್ತುಶೈಲಿಯಲ್ಲಿ ನಿರ್ಮಾಣಗೊಂಡ ಗೋಲ್ಡನ್‌ ಟೆಂಪಲ್‌. ಇದು ಟಿಬೆಟಿಯನ್ನರಿಂದ ನಿರ್ಮಾಣಗೊಂಡ ಒಂದು ಬೌದ್ಧ ದೇವಾಲಯ. ಇದನ್ನು ನೋಡಿದ ನಮಗೆ ಇದೊಂದು ಅದ್ಭುತ ಎಂದೆನಿಸಿದಲ್ಲಿ ಅಚ್ಚರಿಯೇನಿಲ್ಲ. ಇಲ್ಲಿನ ವೈಭವವನ್ನು ಕಣ್ತುಂಬಿಕೊಂಡ ನಾವು ಅಲ್ಲಿಂದ ನೇರವಾಗಿ ಕೊಡಗಿನ ರಾಜ ತನ್ನ ರಾಣಿಯರೊಂದಿಗೆ ವಿಶ್ರಮಿಸಿಕೊಳ್ಳುತ್ತಿದ್ದ ರಾಜಾಸೀಟ್‌ನ ಕಡೆಗೆ ತೆರಳಿದೆವು. ರಾಜಾಸೀಟ್‌ನ ಆಕರ್ಷಣೆ ನಮ್ಮೆಲ್ಲರ ಧಣಿವನ್ನು ಮರೆಸುವಂತಿತ್ತು. ಒಂದೆಡೆ ಜೋರಾಗಿ ಬೀಸುವ ಗಾಳಿ, ಇನ್ನೊಂದೆಡೆ ಬಿಳಿ ಮೋಡಗಳು ಸರಿಯುವ ರೀತಿ ಅದ್ಭುತ. ರಾಜಾಸೀಟ್‌ನಿಂದ ಮಡಿಕೇರಿಯ ಸುತ್ತಲಿನ ಸುಂದರ ಪರಿಸರವನ್ನು ಕಣ್ತುಂಬಿಕೊಂಡೆವು. ಅಷ್ಟರಲ್ಲಾಗಲೆ ನಾವು ಮಡಿಕೇರಿ ಪ್ರವಾಸಕ್ಕೆ ವಿದಾಯ ಹೇಳುವ ಸಮಯ ಬಂದೇ ಬಿಟ್ಟಿತು.

    ಮಡಿಕೇರಿ ಪ್ರವಾಸದಲ್ಲಿ ಕಳೆದ ಎಲ್ಲ ನೆನಪುಗಳನ್ನು, ಮಡಿಕೇರಿಯ ಪ್ರಕೃತಿ ಸೌಂದರ್ಯವನ್ನು ಮನಸ್ಸಿನಲ್ಲಿ ತುಂಬಿಕೊಂಡು ಮಂಗಳೂರಿನತ್ತ ಹೊರಟೆವು. ಮರಳಿ ಬರುವಾಗ ಎಲ್ಲರ ಮುಖದಲ್ಲೂ ಒಂದು ಮೌನ ಆವರಿಸಿತ್ತು. ಆ ಮೌನದಲ್ಲಿ ಮಡಿಕೇರಿಯಲ್ಲಿ ಕಳೆದ ಸಣ್ಣ ಸಣ್ಣ ಚಿತ್ರಣಗಳು ನೆನಪಾಗುತ್ತಿತ್ತು. ಮಡಿಕೇರಿಯ ಆ ಜಿಟಿಜಿಟಿ ಮಳೆ ಇನ್ನೂ ನಮ್ಮ ಮೈಯನ್ನು ತಾಕುತ್ತಲೇ ಇದೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಹೋಮ್‌ಸ್ಟೇಯಲ್ಲಿ ಕಳೆದ ಕ್ಷಣಗಳು, ಆ ಚಳಿ, ಚಾಕಲೇಟ್‌ ಅಂಗಡಿಗಳು, ಕಾಫಿ ತೋಟ ಇವೆಲ್ಲವೂ ಇನ್ನೂ ನನ್ನ ಕಣ್ಣಮುಂದೆಯೇ ಇದೆಯೇನೋ ಎಂಬಂತಿತ್ತು. ಅಷ್ಟರಲ್ಲಾಗಲೇ ನಾವು ಘಾಟಿ ದಾಟಿ ಮುಂದೆ ಬಂದಿದ್ದೆವು. ನಾವು ಅಲ್ಲೇ ಇದ್ದ ಅಂಗಡಿಯಲ್ಲಿ ಚಹಾ ಕುಡಿದೆವು. ಆಗ ನನಗೆ ಅರಿವಾದ ವಿಷಯವೇನೆಂದರೆ, ನಾವು ಮಂಗಳೂರಿಗೆ ಸಮೀಪಿಸುತ್ತಿದ್ದೇವೆ ಎಂದು. ಏಕೆಂದರೆ, ಅದರ‌ಲ್ಲಿ ಮಡಿಕೇರಿಯ ಚಹಾದ ಸ್ವಾದವಿರಲಿಲ್ಲ. 

ನಮಗೆ ಇಷ್ಟೊಂದು ಆಪ್ತವಾಗಿದ್ದ ಮಡಿಕೇರಿಯ ಕಡೆಯಿಂದ ಈಗ ನೆರೆಹಾವಳಿಯ ಸುದ್ದಿಗಳು ಕೇಳಿ ಬೇಸರವಾಗುತ್ತಿದೆ.

ಪ್ರೀತೇಶ್‌ ಕುಮಾರ್‌
ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು

Trending videos

Back to Top