ಮುಖಪುಟ /ನಮ್ಮ ದೇವಾಲಯಗಳು  

ನಿಡಗಲ್ಲು ಲಕ್ಷ್ಮೀನರಸಿಂಹ ದೇವಾಲಯ

Lakxmi Narasimhaತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕಣಶಿಲೆಯ ಬೆಟ್ಟಗಳ ಸಾಲಿನಲ್ಲಿ ಮುಖ್ಯವಾದದ್ದು 3722 ಅಡಿ ಎತ್ತರವಿರುವ ಭವ್ಯ ನಿಡುಗಲ್ಲು ಬೆಟ್ಟ. ನಿಡುಗಲ್ಲು ಹಿಂದೆ ಒಂದು ಪಾಳೆಯಪಟ್ಟವಾಗಿತ್ತು. ನಿಡಗಲ್ಲಿಗೆ ರಕ್ಷಣೆಯಾಗಿ ಹಲವು ಸುತ್ತು ಹಾಗೂ ಸಾಲು ಕೋಟೆಗೋಡೆಗಳಿವೆ. ಇದಕ್ಕೆ ಮಾತನೂರು ಬಾಗಿಲು, ಸಿಂಗಾರದ ಬಾಗಿಲು, ಸಿಂಹಲಯ್ಯನ ಬಾಗಿಲು, ದಿಡ್ಡಿ ಬಾಗಿಲು ಎಂಬ ದ್ವಾರಗಳಿವೆ. ನೊಳಂಬರು, ಚೋಳರು ಹಾಗೂ ಚಾಳುಕ್ಯರ ಪ್ರತಿನಿಧಿಗಳು ಹಾಗೂ ಸಾಮಂತರ ವಶದಲ್ಲಿದ್ದ ದುರ್ಗವನ್ನು ಹೊಯ್ಸಳರ ದೊರೆ ಇಮ್ಮಡಿ ಬಲ್ಲಾಳ ತನ್ನ ಕೈವಶ ಮಾಡಿಕೊಂಡ. ವಿಜಯನಗರದ ಅರಸರ ಕಾಲದಲ್ಲಿ ತಿಪ್ಪರಾಜನ ವಂಶಸ್ಥರು ಪಾಳೆಯಗಾರರಾಗಿ ಆಳಿದರು. ನಂತರ 1761ರಲ್ಲಿ ಇದು ಹೈದರಲಿಯ ವಶವಾಯ್ತು ಎನ್ನುತ್ತದೆ ಇತಿಹಾಸ. ಈ ದುರ್ಗವನ್ನು ಅಷ್ಠ ಗಣಪತಿ, ಅಷ್ಠ ದುರ್ಗೆಯರು ಹಾಗೂ ಅಷ್ಠ ಭೈರವರು ರಕ್ಷಿಸುತ್ತಿದ್ದರು ಎಂದು ಶಾಸನಗಳಲ್ಲಿ ಉಲ್ಲೇಖವಿದೆ.

ನಿಡಗಲ್ಲು ಬೆಟ್ಟದ ಮೇಲೆ ಹಾಗೂ ಊರಿನಲ್ಲಿ  ಸರವಡೇಶ್ವರ, ಲಕ್ಷ್ಮೀನರಸಿಂಹಸ್ವಾಮಿ,  ಗಣಪತಿ, ಮಾರಿಕಾಂಬ, ಸೀತಾರಾಮದೇವರ ಗುಡಿ, ಆಂಜನೇಯ ಗುಡಿ, ಕಂಬದ ರಾಯನ ದೇವಾಲಯಗಳಿವೆ.

ಇಲ್ಲಿರುವ ದೇವಾಲಯಗಳ ಪೈಕಿ ಲಕ್ಷ್ಮೀನರಸಿಂಹ ದೇವಾಲಯ ಅತಿ ಪುರಾತನವಾದದ್ದು. ಸಾಧಾರಣ ಕಲ್ಲಿನ ವಿಶಾಲ ಕಟ್ಟಡದಲ್ಲಿ ಏಕ ಕೂಟದ ದೇವಾಲಯ ನಿರ್ಮಿಸಲಾಗಿದೆ. ದೇವಾಲಯದ ಮೇಲೆ ನಾಗರಶೈಲಿಯಂತೆ ಏಳು ಅಂತಸ್ತಿನ ಗೋಪುರವಿದೆ. ಆದರೆ ಈ ಗೋಪುರಗಳಲ್ಲಿ ಯಾವುದೇ ಅಲಂಕರಣಗಳಿಲ್ಲ. ಭಿತ್ತಿಗಳಲ್ಲೂ ಯಾವುದೇ ಕೆತ್ತನೆಗಳಿಲ್ಲ. ತಳಪಾಯದ ಕೊನೆಯ ಹಂತದಲ್ಲಿ ಮಾತ್ರ ಸಾಧಾರಣ ಅಲಂಕಾರವಿದೆ. ಈ ದೇವಾಲಯವನ್ನು ಹರತಿಯ ತಿಮ್ಮಪ್ಪನಾಯಕ ಕಾಲದಲ್ಲಿ ಈ ದೇವಾಲಯ ಜೀರ್ಣೋದ್ಧಾರವಾಗಿದೆ ಎಂದು ಹೇಳಲಾಗುತ್ತದೆ.

ಇಲ್ಲಿನ ಗರ್ಭಗೃಹದಲ್ಲಿರುವ ಲಕ್ಷ್ಮೀನರಸಿಂಹ ಮೂರ್ತಿ ನಯನ ಮನೋಹರವಾಗಿದೆ. ಶಾಂತಸ್ವರೂಪದ ನರಸಿಂಹ ಇಲ್ಲಿ ಲಕ್ಷ್ಮೀದೇವಿಯನ್ನು ತನ್ನ ಎಡ ತೊಡೆಯ ಮೇಲೆ ಕೂರಿಸಿಕೊಂಡಿರುವ ಮೂರ್ತಿಯನ್ನು ಶಿಲ್ಪಿ ಸಂದರವಾಗಿ ಕಡೆದಿದ್ದಾನೆ.  ಇಲ್ಲಿಗೆ ಬರುವ ಭಕ್ತರು ರಾಮತೀರ್ಥದಲ್ಲಿ ಮಿಂದು ದೇವರ ದರ್ಶನ ಮಾಡುತ್ತಾರೆ. ರಾಮಚಂದ್ರ ಮೂರ್ತಿ ವನವಾಸಕಾಲದಲ್ಲಿ ಇಲ್ಲಿಗೆ ಬಂದಿದ್ದನೆಂದು ಹೇಳಲಾಗುತ್ತದೆ. ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಕಷ್ಟಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆ.

ಪಾವಗಡದಿಂದ ನಿಡಗಲ್ಲು ಬೆಟ್ಟಕ್ಕೆ ರಸ್ತೆ ಇದೆ. ಅರಣ್ಯ ಇಲಾಖೆಯ ವಸತಿ ಗೃಹವಿದೆ. ಸುಂದರ ಗುಡ್ಡಪ್ರದೇಶ ಹಾಗೂ ಅರಣ್ಯವನ್ನು ಹೊಂದಿರುವ ಇಲ್ಲಿ ವನ್ಯಜೀವಿಗಳನ್ನೂ ನೋಡಬಹುದು. ಗರಿ ಬಿಚ್ಚಿ ನರ್ತಿಸುವ ನವಿಲುಗಳೂ ಇಲ್ಲಿವೆ.

ಮುಖಪುಟ /ನಮ್ಮ ದೇವಾಲಯಗಳು