ಮುಖಪುಟ /ಸುದ್ದಿ ಸಮಾಚಾರ   
 

ಗುಲ್ಬರ್ಗಾ ದಕ್ಷಿಣ ಜೆಡಿಎಸ್ ಪಾಲು; ಕಡೂರಿನಲ್ಲಿ ಅರಳಿದ ಕಮಲ

aruna revuraಬೆಂಗಳೂರು, ಸೆ.೧೬ -ತೀವ್ರ ಕುತೂಹಲ ಕೆರಳಿಸಿದ್ದ ಗುಲ್ಬರ್ಗಾ ದಕ್ಷಿಣ ಹಾಗೂ ಕಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಗುಲ್ಬರ್ಗಾದಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದರೆ, ಕಡೂರಿನಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ.

ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಜಾತ್ಯಾತೀತ ಜನತಾದಳದ ಅಭ್ಯರ್ಥಿ ಅರುಣಾ ಚಂದ್ರಶೇಖರ ಪಾಟೀಲ್ ಅವರು ಜಯಗಳಿಸಿದ್ದಾರೆ.

ಅರುಣಾ ಚಂದ್ರಶೇಖರ ಪಾಟೀಲ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಶಿಲ್ ಜಿ ನಮೋಶಿ ಅವರನ್ನು ೩೫೩೨ಮತಗಳ ಅಂತರದಿಂದ ಸೋಲಿಸಿದರು.

ವಿಜಯಿ ಅಭ್ಯರ್ಥಿ ೩೯೪೩೦ ಮತಗಳನ್ನು ಗಳಿಸಿದರು. ಬಿಜೆಪಿ ಅಭ್ಯರ್ಥಿ ೩೫೮೯೮ ಮತಗಳನ್ನು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಜಯಸಿಂಗ್ ಧರ್ಮಸಿಂಗ್ ಅವರು ೩೫೫೬೭ಮತಗಳನ್ನು ಪಡೆದರು.

ಸೆಪ್ಟಂಬರ್ ೧೩ರಂದು ನಡೆದ ಚುನಾವಣೆಯಲ್ಲಿ ಒಟ್ಟು ೧೧೫೩೭೮ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಶೇ.೫೪.೯ ಮತದಾನ ದಾಖಲಾಗಿತ್ತು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಕಟ್ಟಡದಲ್ಲಿ ಮತ ಎಣಿಕೆ ಕಾರ್ಯ ಬೆಳಿಗ್ಗೆ ೮ ಗಂಟೆಗೆ ಸರಿಯಾಗಿ ಆರಂಭವಾಯಿತು. ಜಿಲ್ಲಾಧಿಕಾರಿ ಡಾ.ವಿಶಾಲ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎ.ಪದ್ಮನಯನ ಮತ್ತಿತರ ಅಧಿಕಾರಿಗಳು ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದು, ಮತ ಎಣಿಕೆ ಮೇಲುಸ್ತುವಾರಿ ನೋಡಿಕೊಂಡರು. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತು ಆಯೋಜಿಸಲಾಗಿತ್ತು.

kamala, BJPಕಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಡಾ. ವೈ.ಸಿ. ವಿಶ್ವನಾಥ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ವೈಎಸ್‌ವಿ ದತ್ತಾ ಅವರಿಗಿಂತ ೧೩,೮೯೭ ಮತಗಳ ಭಾರೀ ಅಂತರದಿಂದ ಜಯ ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ೫೫೭೯೬ ಮತ ಪಡೆದರೆ, ವೈಎಸ್‌ವಿ ದತ್ತಾ ೪೧೮೯೯ ಮತ ಪಡೆದರು, ಕಾಂಗ್ರೆಸ್‌ನ ಕೆ.ಎಂ. ಕೆಂಪರಾಜು ೩೦೩೩೦ ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಉಪ ಚುನಾವಣೆ ಪ್ರಕ್ರಿಯೆ ಸಂಪೂರ್ಣ ಶಾಂತಿಯುತವಾಗಿ   ಸುಗಮವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಜಿಲ್ಲಾಧಿಕಾರಿ ಅವರು ಧನ್ಯವಾದ ಸಲ್ಲಿಸಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ